Rain water harvesting in Malenadu ( ಮಳೆನೀರು ಕೊಯ್ಲು)
ಕಳೆದ ೨-೩ ವಾರಗಳಿಂದ ಮಲೆನಾಡಿನಾದ್ಯಂತ ಉತ್ತಮ ಮಳೆಯಾಗುತ್ತಿದೆ, ಅಗಣಿತ ಪ್ರಮಾಣದ ನೀರು ಮಲೆನಾಡನ್ನು ತೊಯುತ್ತಿದೆ, ಹೊಳೆ ಹಳ್ಳಗಳು ಪಾತ್ರ ಮೀರಿ ಉಕ್ಕಿ ಹರಿಯುತ್ತಿವೆ. ಆದರೆ ಇದೇ ಮಲೆನಾಡು ಕಳೆದ ಕೆಲವು ವರ್ಷಗಳಿಂದ ಬೇಸಿಗೆಯಲ್ಲಿ ನೀರಿನ ಅಭಾವ ಎದುರಿಸುತ್ತಿದೆ. ದಕ್ಷಿಣಭಾರತದಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳನ್ನು ತನ್ನ ಒಡಲೊಳಗೆ ಹೊಂದಿರುವ 'ಮಳೆಯ ನಾಡು' ಮಲೆನಾಡು ಬಯಲುಸೀಮೆಗಳಂತೆ ಬೇಸಿಗೆಯಲ್ಲಿ ನೀರಿನ ಅಭಾವ ಎದುರಿಸುತ್ತಿದೆ. ಮೊದಲೆಲ್ಲ ತನ್ನ ಮೇಲ್ಪದರದಲ್ಲೇ ಜಲನಿಧಿಯನ್ನು ಕೊಡುತ್ತಿದ್ದ ಮಲೆನಾಡು ಇಂದು ನೂರಾರು ಅಡಿ ಒಡಲು ಬಗೆದರೂ ನೀರಿನ ಪಸೆಯನ್ನೂ ನೀಡದೆ ಪ್ರತಿ ಮಲೆನಾಡಿಗನನ್ನೂ ಚಿಂತೆಗೀಡು ಮಾಡಿದೆ.
ಹಾಗಾದರೆ ಈ ಸ್ಥಿತಿಗೆ ಕಾರಣವೇನು, ಪರಿಹಾರಗಳೇನು?
ಭೂಮಿಯ ಒಡಲು ಬಗೆದರೂ ನೀರಿನ ಸುಳಿವು ಸಿಗುವುದು ಕಷ್ಟವಾಗಿದೆ ಎಂದರೆ ಅದು ಭೂಮಿಯ ಒಡಲು ಬರಿದಾಗುತ್ತಿದೆ, ಅಂತರ್ಜಲ ಮಟ್ಟ ಇಳಿಕೆಯಾಗಿದೆ ಎಂಬುದರೆ ಸೂಚನೆ. ಈ ಸೂಚನೆಯನ್ನು ಪ್ರಾರಂಭದಲ್ಲಿಯೇ ಗ್ರಹಿಸಿ ಪರಿಹಾರ ಮಾರ್ಗ ಕಂಡುಕೊಳ್ಳದೆ ಹೋದರೆ ಮಲೆನಾಡು, ಮಲೆನಾಡಿಗ ಇಬ್ಬರೂ ತೊಂದರೆ ಅನುಭವಿಸಬೇಕಾಗುತ್ತದೆ.
ಪರಿಹಾರಗಳೇನು?
ಬರಿದಾಗುತ್ತಿರುವ ಭೂಮಿಯ ಒಡಲನ್ನು ಇನ್ನಷ್ಟು ಬರಿದಾಗದಂತೆ, ಕಲ್ಮಶಗೊಳ್ಳದಂತೆ ತಡೆದು ಅದನ್ನು ಮತ್ತೆ ಜಲನಿಧಿಯಿಂದ ತುಂಬುವಂತೆ ಮಾಡುವುದು ನಮ್ಮ ಮುಂದಿರುವ ಸೂಕ್ತ ಮಾರ್ಗ.
ಹೇಗೆ?
ಭೂಮಿಯ ಒಡಲಿಗೆ ಮತ್ತೆ ಜಲಪೂರಣ ಮಾಡುವ ಪರಿಣಾಮಕಾರಿ ಮಾರ್ಗವೆಂದರೆ "ಮಳೆನೀರು ಕೊಯ್ಲು".ಸುಮ್ಮನೆ ಸಾಗಿ ಸಾಗರ ಸೇರುವ ಮಳೆಯ ನೀರನ್ನು ಭೂಮಿಯ ಆಳಕ್ಕಿಳಿಯುವಂತೆ ಮಾಡುವುದಾಗಿದೆ.
*ಮಳೆನೀರು ಕೊಯ್ಲು* - ಇದೇನು???
ಮಳೆನೀರು ಕೊಯ್ಲು ಎಂದರೆ ಮಳೆಯ ನೀರನ್ನು ಒಟ್ಟುಗೂಡಿಸಿ, ಶೇಖರಿಸಿ ಭೂಮಿಯೊಡಲಿಗೆ ಇಂಗಿಸುವುದು ಅಥವ ಉಪಯೋಗಿಸುವುದು.
ಇಂದಿನ ಮಹಾರಾಷ್ಟ್ರದ ಎಲಿಫೆಂಟಾ, ಕನ್ಹೇರಿ ಗುಹೆಗಳಲ್ಲಿ ಬಹಳ ಹಿಂದೆಯೇ ಮಳೆನೀರು ಕೊಯ್ಲು ಮಾಡಿರುವ ಸಾಕ್ಷಿಗಳು ಸಿಗುತ್ತವೆ ಹಾಗು ರಾಜಸ್ಥಾನದ ಥಾರ್ ಮರುಭೂಮಿ ಪ್ರದೇಶದಲ್ಲಿ ಈ ವಿಧಾನ ಈಗಲೂ ಬಳಕೆಯಾಗುತ್ತಿದೆಯೆಂದರೆ ಇದು ಎಷ್ಟು ಪರಿಣಾಮಕಾರಿ ಎಂದು ಅರಿಯಬಹುದು. ಅಷ್ಟೇ ಅಲ್ಲದೆ ನಮ್ಮ ಪಕ್ಕದ ತಮಿಳುನಾಡಿನಲ್ಲಿ ಸರ್ಕಾರವು ೨೦೦೧ರಲ್ಲಿ ಇನ್ನು ಮುಂದೆ ಕಟ್ಟಲಾಗುವ ಪ್ರತಿ ಕಟ್ಟಡಗಳು ಛಾವಣಿ ಆಧಾರಿತ ಮಳೆನೀರು ಕೊಯ್ಲು ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂಬ ಆದೇಶವನ್ನೇ ಹೊರಡಿಸಿದೆಯೆಂದರೆ ಈ ಮಳೆನೀರು ಕೊಯ್ಲು ಮಾಡಬೇಕಾದ ಅವಶ್ಯಕತೆ, ಅನಿವಾರ್ಯತೆಯನ್ನು ಅರಿಯಬೇಕು.
ಈ ಮಳೆನೀರು ಕೊಯ್ಲು ವಿಧಾನವನ್ನು ಅನುಸರಿಸುವುದರಿಂದ ನಮಗೆ, ನಮ್ಮ ಮುಂದಿನ ಪೀಳಿಗೆಗೆ ಲಾಭವೆ ಹೊರತು ಯಾವುದೇ ನಷ್ಟವಿಲ್ಲ.
ಇದರಿಂದ ಅಂತರ್ಜಲ ಮಟ್ಟ ಹೆಚ್ಚುವುದಲ್ಲದೆ ಇದುವರೆಗೆ ಅವಲಂಬಿಸಿದ್ದ ಜಲಮೂಲಗಳು ಬರಿದಾಗದಂತೆ ತಡೆಯಬಹುದು.
ನಗರ ಪ್ರದೇಶಗಳಲ್ಲಿ ಛಾವಣಿ ಆಧಾರಿತ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮೇಲ್ಮೈ ಹರಿವು ಮತ್ತು ಛಾವಣಿ ಆಧಾರಿತ ಮಳೆನೀರು ಕೊಯ್ಲು ವಿಧಾನವನ್ನು ಅನುಸರಿಸಬಹುದು.
ಮಲೆನಾಡು ಪ್ರದೇಶದಲ್ಲಿ ಮಳೆಗಾಲದಲ್ಲಿ ನೀರಿನ ಹರಿವಿಗೆ ಯಾವುದೇ ಅಡೆತಡೆಗಳಿರುವುದಿಲ್ಲ , ವ್ಯರ್ಥವಾಗಿ ಸಾಗರ ಸೇರುವ ನೀರಿಗೆ ಮಳೆನೀರು ಕೊಯ್ಲಿನ ಮೂಲಕ ಮಾರ್ಗವೊಂದನ್ನು ತೋರಿಸಿ ನೀರನ್ನು ಭೂಮಿಯೊಡಲಿಗೆ ಇಂಗಿಸಿದರೆ ಇಂದು ಒದಗಿರುವ , ಮುಂದೆ ಒದಗಬಹುದಾದ ಗಂಭೀರ ಸಮಸ್ಯೆಯಿಂದ ಪಾರಾಗಬಹುದು.
Comments
Post a Comment